ಶಿವಶರಣೆಯರ ವಚನಗಳಲ್ಲಿ ಪ್ರಾಣಿ ಪ್ರತಿಮೆ

  • ಜ್ಯೋತಿ ಶಂಕರ್
  • ಮಮತ ಬಿ ಆರ್ ಸಂಶೋಧನಾ ವಿದ್ಯಾರ್ಥಿ, ಕ. ರಾ. ಮು. ವಿ. ಮೈಸೂರು

Abstract

ಜಗತ್ತಿನ ಸಾಂಸ್ಕೃತಿಕ ಇತಿಹಾಸವನ್ನು ಗಮನಿಸಿದರೆ ನಮ್ಮ ಕನ್ನಡ ನಾಡಿನ ಶರಣಸಂಸ್ಕೃತಿಯು ಮಹತ್ತರವಾದುದು. ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಶರಣ ಸಂಸ್ಕೃತಿ ಹಾಗೂ ವಚನ ಸಾಹಿತ್ಯವು ಅಂದಿನ ಸಮಾಜದಲ್ಲಿ ನೆಲೆಯೂರಿದ್ದ ಅನೇಕ ಮೂಢನಂಬಿಕೆಗಳು, ಅಂಧಶ್ರದ್ಧೆಗಳು, ಅಂಧ ಆಚರಣೆಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಲು ಸಹಾಯಕವಾಗಿದ್ದವು. ಬಸವಣ್ಣನವರಿಂದ ಸ್ಥಾಪಿತವಾದ ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತನ್ನ ಅನುಭವ, ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು ಬಳಸಿಕೊಂಡ ಮಾಧ್ಯಮವೇ ವಚನಗಳು. ಶಿವಶರಣರು ಸಮಾಜದಲ್ಲಿ ಕಂಡ ಅನೇಕ ವಿಷಯಗಳನ್ನು ತಮ್ಮ ಮನದ ಅಂತರಾಳದಲ್ಲಿ ತುಡಿಯುತ್ತಿರುವ ಭಾವನೆಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಅನೇಕ ಪ್ರತಿಮೆಗಳನ್ನು ಬಳಸಿಕೊಂಡರು. ಅವುಗಳಲ್ಲಿ ಪ್ರಾಣಿ ಪ್ರತಿಮೆ ಕೂಡ ಒಂದಾಗಿದೆ. ಪ್ರಾಚೀನ ಕಾವ್ಯಗಳಲ್ಲೂ ಕೂಡ ಈ ಪ್ರಾಣಿ ಪ್ರತಿಮೆಗಳನ್ನು ಬಳಸಿಕೊಂಡು ಅನೇಕ ಕೃತಿಗಳು ಹೊರಬಂದಿವೆ. ಅವುಗಳಲ್ಲಿ ವಡ್ಡಾರಾಧನೆ, ಪಂಚತAತ್ರ, ಕರ್ಣಾಟಕ ಕಾದಂಬರಿ, ಇತ್ಯಾದಿ ಕೃತಿಗಳನ್ನು ಕಾಣಬಹುದಾಗಿದೆ. ಇದೇ ರೀತಿ ವಚನ ಸಾಹಿತ್ಯದಲ್ಲಿ ಶಿವಶರಣೆಯರು ಕೂಡ ತಮ್ಮ ವಚನಗಳಿಗೆ ವಿವಿಧ ಪ್ರಾಣಿಗಳನ್ನು ಪ್ರತಿಮೆಗಳನ್ನಾಗಿ ಬಳಸಿ ತಮ್ಮ ವಚನಗಳ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಾಣಿಪ್ರತಿಮೆಗಳನ್ನು ಬಳಸಿಕೊಳ್ಳುವಿಕೆಯ ಮೂಲಕ ತಮ್ಮ ವಚನಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಸುಲಭವಾಗಿ ಜನಸಾಮಾನ್ಯರಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ. ಶಿವಶರಣೆಯರು ಪ್ರತಿಮೆಗಳನ್ನು ಉಪಮೆ, ರೂಪಕ, ಸಂಕೇತಗಳನ್ನಾಗಿ ಬಳಸಿ ತಮ್ಮ ವಚನಗಳ ಅರ್ಥಕ್ಕೆ ಒಂದು ನೆಲೆಗಟ್ಟನ್ನು ಕಟ್ಟಿ ಕೊಟ್ಟಿದ್ದಾರೆ. ಅಕ್ಕಮಹಾದೇವಿ, ಅಕ್ಕಮ್ಮ, ಅಮುಗೆ ರಾಯಮ್ಮ, ಹಡಪದ ಲಿಂಗಮ್ಮ, ನೀಲಮ್ಮ ಮುಂತಾದವರು ವಿವಿಧ ಪ್ರಾಣಿಗಳನ್ನು ತಮ್ಮ ವಚನಗಳ ಪ್ರತಿಮೆಗಳನ್ನಾಗಿ ಬಳಸಿದ್ದಾರೆ. ಈ ಪ್ರತಿಮೆಗಳು ಪ್ರಾಚೀನ ಕಾವ್ಯಗಳ ಸೌಂದರ್ಯವನ್ನು ಹೆಚ್ಚಿಸುವಂತೆ ವಚನಗಳನ್ನು ಕೂಡ ಸುಂದರವಾಗಿ ಅರ್ಥಪೂರ್ಣಗೊಳಿಸಲು ಸಹಕಾರಿಯಾಗಿವೆ.

Published
2024-10-28
Statistics
Abstract views: 126 times
PDF downloads: 57 times